Monday, August 10, 2009

ಜೂಜು ಎಂಬ ಮಾಯಾಜಾಲ

ಅಂದು ೨೦೦೩ ನೇ ಇಸವಿಯ ಒಂದು ಮಧ್ಯಾಹ್ನ, ಅಂದಾಜು ೩.೩೦ ಗಂಟೆ. ನಾನು ಆವಾಗ ಪಿ.ಯು.ಸಿ. ಓದುತ್ತಿದ್ದೆ. ಬೆಂಗಳೂರಿನ ರಿಚ್ಮಂಡ್ ವೃತ್ತದಲ್ಲಿ ಬಸ್ಸಿಗೋಸ್ಕರ ಕಾಯುತ್ತಿದ್ದೆ.

ಆ ಬಸ್ ತಂಗುದಾಣದಲ್ಲಿ ನಾನು ಕಳೆದಿದ್ದು ಐದೇ ನಿಮಿಷ.

ಆ ತಂಗುದಾಣದಲ್ಲಿ ಬಹಳೇ ಜನ ನೆರೆದಿದ್ದರು.ಆದರೆ, ಬಸ್ಸಿಗೋಸ್ಕರವಲ್ಲ. ಒಬ್ಬಾತ ನೆಲದ ಮೇಲೆ ಕುಳಿತು ಏನೋ ಆಟವಾಡಿಸುತ್ತಿದ್ದ, ಉಳಿದವರೆಲ್ಲ ನೋಡುತ್ತಿದ್ದರು, ಕೆಲವರು ಆಡುತ್ತಿದ್ದರು.

ಆಟವೇನೆಂದರೆ, ಒಟ್ಟು ಮೂರು ದಪ್ಪನೆಯ ಪ್ಲಾಸ್ಟಿಕ್ ತುಂಡುಗಳು, ಆ ಮೂರು ತುಂಡುಗಳ ಪೈಕಿ ಒಂದರ ಕೆಳಬದಿಯಲ್ಲಿ ಒಂದು ಗುರುತು ಇರುತ್ತದೆ. ಆಟ ಆಡಿಸುವವ ಆ ತುಂಡುಗಳನ್ನು ಒಂದೇ ಸವನಾಗಿ ಸ್ಥಾನಪಲ್ಲಟ ಮಾಡುತ್ತಿರುತ್ತಾನೆ. ಒಂದು ಕ್ಷಣದಲ್ಲಿ ಆತನು ಅದನ್ನು ನಿಲ್ಲಿಸಿ ಕೇಳುತ್ತಾನೆ, "ಯಾವ ತುಂಡಿನ ಕೆಳಗಡೆ ಗುರುತು ಇದೆ?" ಎಂದು. ನಾವೇನಾದರೂ ಸರಿ ಹೇಳಿದರೆ, ನಾವು ಪಣ ಹೂಡಿದ ದುಡ್ಡಿನ ಎರಡರಷ್ಟು ಹಣ ನಮಗೆ ಕೊಡುತ್ತಾನೆ, ಒಂದು ಪಕ್ಷ ತಪ್ಪಾದಲ್ಲಿ ನಮ್ಮ ಹಣ ಹೋದಂತೆ.

ನಾನು ನನ್ನ ಬಸ್ಸಿಗಾಗಿ ಕಾಯುತ್ತ ಅದರ ಕಡೆ ಗಮನ ಹೊಗೆಬಿಟ್ಟಿತು. ಒಬ್ಬ ಸುಮಾರು ೩೦-೩೫ ವಯಸ್ಸಿನ, ಅಚ್ಚುಕಟ್ಟಾಗಿ ಬಟ್ಟೆ ಧರಿಸಿ, ಒಳ್ಳೆ ಕೆಲಸ್ದಿಲ್ಲಿರುವಂತೆ ಭಾಸವಾಗುತ್ತಿದ್ದ ವ್ಯಕ್ತಿ, ಆಟವಾಡಿಸುವವನ ಎದುರುಗಡೆ ಕುಳಿತು ಪಣ ಹೂಡುತ್ತಿದ್ದ. ನಾನು ನೋಡಿರುವ ಹಾಗೆ, ಆತ ಒಂದು ಸಲ ಗೆಲ್ಲುವದು ಒಂದು ಸಲ ಸೋಲುವುದು ನಡೆದಿತ್ತು. ಆದರೆ, ಒಂದೆರಡು ಆಟಗಳಲ್ಲಿ ಆತ ಸತತವಾಗಿ ಆತ ಸೋತುಬಿಟ್ಟ. ಆದರೂ ಸಹ ಆತ ಮೂರನೇ ಬಾರಿ ಮತ್ತೆ ಪಣ ಕಟ್ಟಿದ, ಆದರೆ ಆತನ ಜೇಬಿನಲ್ಲಿ ಏನೂ iralilla. ಆತನು ಪಕ್ಕದಲ್ಲಿ ವೀಕ್ಷಿಸುತ್ತಿದ್ದ ಜನರ ಹತ್ತಿರ ಗೋಗರೆದು "ಈ ಸತಿ ನಾನ್ ಗ್ಯಾರಂಟೀ ಗೆದ್ದೇ ಗೆಲ್ತೀನಿ, ನಿಮ್ಮ ದುಡ್ಡು ಡಬಲ್ ಆಗುತ್ತೆ, ಇವನನ್ನ ಈ ಸಲ ಬಿಡುವದಿಲ್ಲ, ದಯವಿಟ್ಟು ಕೊಡಿ" ಎಂದ. ಪಕ್ಕದಲ್ಲಿರುವ ಒಬ್ಬಾತನೂ ಸಹ "ಕಟ್ಟಿ ಸಾರ್, ಈ ಸತಿ ಗ್ಯಾರಂಟೀ ಸಿಗುತ್ತೆ" ಎಂದ. ಆತನ ಮುಖ ನೋಡಲಾಗದೆ ನಾನು(ಐದು ರೂಪಾಯಿ ಊಟವನ್ನ ಯೋಚನೆ ಮಾಡಿ ತಿನ್ನುತ್ತಿದ್ದ ಹುಡುಗ), ಥಟ್ ಅಂತ ಜೇಬಲ್ಲಿರುವ ಎರಡು ನೂರು ರೂಪಾಯಿ(ಯಾವುದೋ ಕೆಲಸಕ್ಕಿತ್ತಿದ್ದ ದುಡ್ಡು) ತೆಗೆದು ಆತನ ಕೈಗೆ ಇಟ್ಟೆ. ಆಗ ನನಗೇನೂ ಅನ್ನಿಸಲಿಲ್ಲ. ಆದರೆ ನನ್ನ ದೃಷ್ಟಿ ಕೇವಲ ಆ ಮನುಷ್ಯ ಪಣ ಕಟ್ಟಿದ ಪ್ಲಾಸ್ಟಿಕ್ ತುಂಡಿನ ಕಡೆಗೇ ನಟ್ಟಿತ್ತು. ಓಹೋ, ಅದು ತಪ್ಪಾಗಿತ್ತು. ನನ್ನ ಎರಡು ನೂರು ರೂಪಾಯಿ ಮಟ್ಯಾಶ್....... "ಏನ್ ಮಾಡ್ಲಿ ದೇವ್ರೇ, ಹೆಂಗಾದ್ರೂ ಮಾಡಿ ನನ್ನ ದುಡ್ಡು ನಂಗೆ ವಾಪಸ್ ಬೇಕು" ಎಂದು ಮನದಲ್ಲೇ ಶಪಿಸುತ್ತಿರುವಾಗ ಆತ "ಸಾರೀ ಸರ್, ಹೋಯ್ತು " ಎಂದಾಗ ಅಳುವುದಷ್ಟೇ ಬಾಕಿ. ಆದರೂ ಸಹ ಏನಾದರೂ ಮಾಡಲೇಬೇಕೆಂದು ಅನ್ನಿಸಿತು. ನಾನೇನಾದರೂ ಎರಡು ನೂರು ರೂಪಾಯಿ ಗೆಲ್ಲಬೇಕೆಂದರೆ, ಇನ್ನೆರಡು ನೂರು ರೂಪಾಯಿ ಪಣವಿಡಬೇಕು. ಆಗ ನನ್ನ ತಲೆಯಲ್ಲಿ ಒಂದೇ ಉದ್ದೇಶ, ಕಳೆದುಕೊಂಡ ದುಡ್ಡು ನನಗೆ ಬೇಕು. ಆಡಿಸುವಾಟ ಮಾತ್ರ ತನ್ನ ಕೈ ತಿರುಗಿಸುತ್ತಲೇ ಇದ್ದ. ಸರಿ, ಆಗುವದು ಆಗೇ ಹೋಗಲಿ ಎಂದು ನಾನು ಮುಂದಿನ ಆಟಕ್ಕೆ, ನನ್ನ ಬಳಿ ಉಳಿದಿರುವ ಎರಡೂ ನೂರು ರೂಪಾಯಿಗಳನ್ನು ಹೂಡಿಯೇ ಬಿಟ್ಟೆ. ನನಗೆ ನಿಜವಾದ ಆಘಾತ ಕಾದಿತ್ತು ನಾನು ಪಣ ಹೂಡಿರುವ ಪ್ಲಾಸ್ಟಿಕ್ ತುಂಡಿನ ಕೆಳಗೆ. ಅದೂ ಸಹ ತಪ್ಪು. ಕಣ್ಣಲ್ಲಿ ನೀರು ಮಾತ್ರ ಬಂದಿತ್ತು, ತುಳುಕುವುದಷ್ಟೇ ಬಾಕಿ. ನನ್ನ ಅದೃಷ್ಟಕ್ಕೆ ಕಳೆದುಕೊಂಡಿರುವ ನಾಲ್ಕು ನೂರು ರೂಪಾಯಿ ಗೆಲ್ಲಲು ಇನ್ನೂ ನಾಲ್ಕು ನೂರರ ನೋಟುಗಳು ಇರಲಿಲ್ಲ. ಇನ್ನೊಂದು ಅದೃಷ್ಟವೇನೆಂದರೆ, ಬಸ್ಸಿನ ಟಿಕೇಟು ಹಾಗೂ ಊಟ(ಐದು ರೂಪಾಯಿ) ಮಾಡಲು, ನನ್ನ ಹತ್ತಿರವಿತ್ತು.

ಆ ದಿನ ಬೇರೇನೂ ಯೋಚಿಸದೇ, ಕಣ್ಣೀರಿನ ಆಸರೆಯೊಂದಿಗೆ ಊಟ ಮಾಡಿ ಮಲಗಿದೆ. ಆದರೆ, ಆ ನಾಲ್ಕು ನೂರು ರೂಪಾಯಿ ಮಾತ್ರ ಜೀವನದಲ್ಲಿ ದೊಡ್ಡ ಪಾಠ ಕಲಿಸಿತು. ಆ ದಿನದ ನಂತರ ಅಂತಹ ಜಾಗದ ಬಳಿ ನಿಲ್ಲುವುದೇನು? ನೋಡುವುದೂ ಇಲ್ಲ. ಈ ದಿನವೂ ಸಹ ಆ ರಿಚ್ಮಂಡ್ ಬಳಿ ಓಡಾಡುತ್ತೇನೆ, ಆದರೆ ಆ ದಿನದ ನಂತರ ಒಂದು ಸಾರಿಯೂ ಆ ಮೂವರೂ ಜೊತೆಗಾರರನ್ನು (ಆಟ ಆಡಿಸಿದವ, ಪಣ ಕಟ್ಟಿದವ, ಆತನಿಗೆ ಸಹಾಯ ಮಾಡಿ ಎಂದು ಹೇಳಿದವ) ಕಂಡಿಲ್ಲ. ದೇಶದ ಎಷ್ಟೋ ವೃತ್ತಗಳು, ಎಷ್ಟೋ ಜನರು ಅವರ "ಕಣ್ಕಟ್ಟು" ಮಾಯಕ್ಕೆ ಬಲಿಯಾಗುತ್ತಿದ್ದಾರೋ, ಆ ಭಗವಂತನಿಗೆ ಗೊತ್ತು.